ಪ್ರಜೆತನ -
 	ಒಂದು ರಾಜ್ಯದ ಕಾನೂನು ವಿಧಿಸುವ ನಿಯಮಗಳಿಂದಾಗಿ ಆ ರಾಜ್ಯಕ್ಕೂ ಒಬ್ಬ ವ್ಯಕ್ತಿಗೂ ನಡುವೆ ಉದ್ಭವಿಸುವ ಸಂಬಂಧ, ಪೌರುತ್ವ (ಸಿಟಿಜûನ್‍ಷಿಪ್) ಇದರ ಫಲವಾಗಿ, ಈ ಕಾನೂನಿನ ಪ್ರಕಾರ, ಪ್ರಜೆತನಕ್ಕೆ ಅನ್ವಯವಾಗುವ ಕೆಲವು ನಿಶ್ಚಿತ ಕರ್ತವ್ಯಗಳೂ ಹಕ್ಕುಗಳೂ ಉದ್ಭವಿಸುತ್ತವೆ. ಒಂದು ರಾಜ್ಯಕ್ಕೆ ಈ ರೀತಿ ಸಂಬಂಧ ಹೊಂದಿದ ವ್ಯಕ್ತಿಯ ಸ್ಥಿತಿಯನ್ನೂ, ಎಂದರೆ ಅದರ ಪ್ರಜೆಯಾಗಿರುವುದನ್ನೂ, ಇದು ನಿರ್ದೇಶಿಸುತ್ತದೆ. ಅಂಥ ಸ್ಥಿತಿ ಅಥವಾ ಸ್ಥಾನಕ್ಕೆ ಸಂಬಂಧಿಸಿದಂತೆ ಇತರ ರಾಜ್ಯಗಳ ಎದುರಿನಲ್ಲಿ ಆ ರಾಜ್ಯಕ್ಕೆ ಅಂತರರಾಷ್ಟ್ರೀಯ ಕಾನೂನು ಕೆಲವು ನಿಶ್ಚಿತ ಹಕ್ಕುಗಳನ್ನೂ ಹೊಣೆಗಳನ್ನೂ ವಿಧಿಸುತ್ತದೆ. ಎಂದರೆ ಇಲ್ಲಿ ರಾಜ್ಯಗಳಿಗೆ ವಿಶ್ವದ ಪ್ರಜೆತನವನ್ನು ಆರೋಪಿಸಿದಂತಾಗುತ್ತದೆ.

	ಇಂಗ್ಲಿಷಿನಲ್ಲಿ ಸಿಟಿಜûನ್ ಎಂಬ ಪದವನ್ನು ಸ್ಥಳೀಯ ಪುರಸಭಾ ಸದಸ್ಯನಿಗೆ ಪೌರನಿಗೆ, ಸಂಬಂಧಿಸಿದಂತೆ ಬಳಸಲಾಗುತ್ತಿತ್ತು. ಸಬ್ಜೆಕ್ಟ್ ಎಂಬ ಪದವನ್ನು ರಾಜ್ಯದ ಅಥವಾ ರಾಜನ ಪ್ರಜೆಗೆ ಬಳಸಲಾಗುತ್ತಿತ್ತು. ಯೂರೋಪಿನ ಇತರ ದೇಶಗಳಲ್ಲೂ ಸಿಟಿಜûನ್‍ಷಿಪ್ ಎಂಬ ಪದ ಒಂದು ಸ್ಥಳದ ಪೌರತ್ವಕ್ಕೆ ಅನ್ವಯಿಸಿದಂತೆ ಬಳಕೆಯಾಗುತ್ತಿತ್ತು. ಸ್ವಾತಂತ್ರ್ಯದ ಸ್ಥಿತಿಯನ್ನು ನಿರೂಪಿಸುವ ಪದವಾಗಿ ಇದು ಪ್ರಚಾರಕ್ಕೆ ಬಂತು. ಪ್ರಾಚೀನ ಭಾರತದಲ್ಲಿ ಪ್ರಜೆಗಳು ಒಂದು ರಾಜ್ಯದ ಅಥವಾ ರಾಜನ ಅಧಿಕಾರ ವ್ಯಾಪ್ತಿಗೆ ಒಳಪಟ್ಟವರೆನಿಸಿದ್ದರು. ಪೌರ ಎಂಬ ಪದಕ್ಕೆ ಪುರವಾಸಿ ಎಂಬ ಅರ್ಥವಿತ್ತು. ಕನ್ನಡದಲ್ಲಿ ಸಿಟಿಜûನ್ ಎಂಬುದಕ್ಕೆ ಸಮಾನಾರ್ಥಕವಾಗಿ ಪೌರ, ನಾಗರಿಕ, ಪ್ರಜೆ ಎಂಬೆಲ್ಲ ಪದಗಳು ಬಳಕೆಯಲ್ಲಿವೆ. ಇಲ್ಲಿ ಸಿಟಿಜûನ್ ಸಿಟಿಜûನ್‍ಷಿಪ್ ಎಂಬ ಪದಗಳಿಗೆ ಅನುಕ್ರಮವಾಗಿ ಪ್ರಜೆ, ಪ್ರಜೆತನ ಎಂಬ ಪದಗಳನ್ನು ಸ್ವೀಕರಿಸಲಾಗಿದೆ.

	ಪ್ರಾಚೀನ ಗ್ರೀಕ್ ರಾಜ್ಯಗಳು ಜನಸಂಖ್ಯೆ ಮತ್ತು ವಿಸ್ತೀರ್ಣದಲ್ಲಿ ಚಿಕ್ಕವಾಗಿದ್ದು ನಗರರಾಜ್ಯ ಎಂಬ ಹೆಸರನ್ನು ಹೊಂದಿದ್ದವು. ನಗರ ರಾಜ್ಯಗಳಲ್ಲಿ ವಾಸಿಸುತ್ತಿದ್ದ ಎಲ್ಲ ಜನರಿಗೂ ಪ್ರಜೆತನ ಇರಲಿಲ್ಲ. ಮಹಿಳೆಯರು, ಗುಲಾಮರು ಹಾಗೂ ನಗರಗಳ ಹೊರಗೆ ವಾಸಿಸುತ್ತಿದ್ದವರಿಗೆ ಪ್ರಜೆತನ ಇರುತ್ತಿರಲಿಲ್ಲ. ಪ್ರಾಚೀನ ಗ್ರೀಕ್ ತತ್ತ್ವಜ್ಞಾನಿಗಳ ಪ್ರಕಾರ, ನಗರ ಅಥವಾ ಪುರದಲ್ಲಿ ವಾಸಿಸುತ್ತಿದ್ದು, ಅಲ್ಲಿಯ ರಾಜಕೀಯ ಹಾಗೂ ಆಡಳಿತ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಅವಕಾಶ ಹೊಂದಿದ್ದವರು ಮಾತ್ರ ಪ್ರಜೆತನ ಹೊಂದಿದ್ದರು.

	ಗ್ರೀಕ್ ನಗರ ರಾಜ್ಯಗಳಿಗಿಂತ ವಿಶಾಲವಾಗಿದ್ದ ರೋಮನ್ ಸಾಮ್ರಾಜ್ಯದಲ್ಲಿ ಪ್ರಜೆತನ ಕೆಲವರಿಗೆ ಮಾತ್ರ ಸೇರಿದ್ದಾಗಿರಲಿಲ್ಲ. ಗುಲಾಮರು, ವಿದೇಶಿಯರು ಹಾಗೂ ಇತರ ಕೆಲವರನ್ನು ಬಿಟ್ಟು, ರೋಮ್ ಸಾಮ್ರಾಜ್ಯದಲ್ಲಿ ವಾಸಿಸುತ್ತಿದ್ದ ಎಲ್ಲರಿಗೂ ಪ್ರಜೆತನ ಇತ್ತು.

	ಮಧ್ಯಯುಗದಲ್ಲಿ ಕೂಡ ರಾಜ್ಯದ ಎಲ್ಲ ಜನರಿಗೂ ಪ್ರಜೆತನ ಇರಲಿಲ್ಲ. ಈ ಕಾಲದಲ್ಲಿ ಊಳಿಗಮಾನ್ಯ ಪದ್ಥತಿ ಅಸ್ತಿತ್ವದಲ್ಲಿತ್ತು. ಮಠಾಧಿಪತಿಗಳು, ಜಮೀನ್ದಾರರು ಮತ್ತು ಸರದಾರರಿಗೆ ಮಾತ್ರ ವಿಶೇಷ ಹಕ್ಕು ಹಾಗೂ ಸೌಲಭ್ಯಗಳು ಇದ್ದವು. ಅವರು ಹೊಂದಿದ್ದ ಜಮೀನನ್ನು ಆಧರಿಸಿ ಅವರ ಸ್ಥಾನಮಾನಗಳನ್ನು ನಿರ್ಧರಿಸಲಾಗುತ್ತಿತ್ತು. ರೈತರು ಹಾಗೂ ಉಪಕಸುಬುಗಳಲ್ಲಿ ತೊಡಗಿದ್ದ ಹೆಚ್ಚಿನ ಸಂಖ್ಯೆಯ ಇತರರಿಗೆ ಯಾವುದೇ ಹಕ್ಕುಗಳು ಇರಲಿಲ್ಲ. ಅವರು ಪ್ರಜೆತನ ಗಳಿಸಿರಲಿಲ್ಲ.

	ಆಧುನಿಕ ರಾಜ್ಯಗಳು ಬಹಳ ವಿಶಾಲವಾಗಿರುವುದರಿಂದ ರಾಜ್ಯದ ಎಲ್ಲ ಪ್ರಜೆಗಳೂ ನೇರವಾಗಿ ರಾಜ್ಯದ ಆಡಳಿತದಲ್ಲಿ ಪಾಲ್ಗೊಳ್ಳುವಂತಿಲ್ಲ. ಅಲ್ಲದೆ, ಪ್ರಜಾಪ್ರಭುತ್ವದ ಯುಗವೆಂದು ಕರೆಸಿಕೊಳ್ಳುವ ಆಧುನಿಕ ಯುಗದಲ್ಲಿ ಸಮಾನತೆಯ ತತ್ತ್ವವನ್ನು ಆಧರಿಸಿದ ಪ್ರಜಾಪ್ರಭುತ್ವವುಳ್ಳ ರಾಜ್ಯದ ಎಲ್ಲ ಸ್ತ್ರೀಪುರುಷರೂ (ವಿದೇಶಿಯರನ್ನುಳಿದು) ಅಲ್ಲಿಯ ಪ್ರಜೆತನ ಹೊಂದಿರುತ್ತಾರೆ. ರಾಜ್ಯ ಮತ್ತು ಪ್ರಜೆತನ ಇವುಗಳ ನಡುವೆ ನಿಕಟ ಸಂಬಂಧವಿರುವುದರಿಂದ ಪ್ರತಿಯೊಬ್ಬ ವ್ಯಕ್ತಿಗೂ ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಪ್ರಜೆತನ ಹೊಂದಿರಲು ಅವಕಾಶವಿರುವುದಿಲ್ಲ. ವಿವಿಧ ಉದ್ದೇಶಗಳಿಗಾಗಿ ಒಂದು ರಾಜ್ಯದ ಪ್ರಜೆಗಳು (ರಾಯಭಾರಿಗಳು, ಅತಿಥಿಗಳು ವಿಶೇಷ ಕಾರ್ಯಗಳಿಗಾಗಿ ಬಂದವರು) ಮತ್ತೊಂದು ರಾಜ್ಯದಲ್ಲಿ ವಾಸಿಸಲೇಬೇಕಾಗುತ್ತದೆ. ಇಂಥವರನ್ನು ಪರಕೀಯರು ಇಲ್ಲವೇ ವಿದೇಶಿಯರು ಎಂದು ಪರಿಗಣಿಸಲಾಗುತ್ತದೆ. ವಿದೇಶಿಯರಿಗೆ ಆ ರಾಜ್ಯದ ರಾಜಕೀಯ ಹಕ್ಕುಗಳು ಇರುವುದಿಲ್ಲ. ಅವರು ಕೇವಲ ನಾಗರಿಕ ಹಕ್ಕುಗಳನ್ನು ಮಾತ್ರ ಪಡೆದಿರುತ್ತಾರೆ. ಪ್ರಜಾಪ್ರಭುತ್ವ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸಹಕಾರಗಳಿಂದಾಗಿ ವಿದೇಶಿಯರನ್ನು ಗೌರವದಿಂದ ಕಾಣಲಾಗುತ್ತದೆ. ಅಂಥವರು ಯಾವ ರಾಜ್ಯದಲ್ಲಿ ವಾಸಿಸುತ್ತಿರುತ್ತಾರೋ ಆ ರಾಜ್ಯಕ್ಕೆ ಸಂಬಂಧಿಸಿದಂತೆ ಕೆಲವು ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ಆ ರಾಜ್ಯದ ಕಾನೂನುಗಳ ವ್ಯಾಪ್ತಿಯಲ್ಲಿ ರಕ್ಷಣೆ ಪಡೆಯಲು ಅವರು ಅರ್ಹತೆ ಪಡೆದಿರುತ್ತಾರೆ. ಆದರೆ ಕಡ್ಡಾಯ ಸೈನಿಕ ಸೇವೆಯನ್ನು ಅಂಥರಿಗೆ ವಿಧಿಸುವಂತಿಲ್ಲ.

	ಭೂಪ್ರದೇಶದ ವರ್ಗಾವಣೆ, ಆಯ್ಕೆ ಮೊದಲಾದ ಅಂತರರಾಷ್ಟ್ರೀಯ ವ್ಯವಹಾರಗಳನ್ನು ಬಿಟ್ಟರೆ ಸಾಮಾನ್ಯವಾಗಿ, ಪ್ರಜೆತನ ಪಡೆಯುವ ಮುಖ್ಯ ವಿಧಾನಗಳೆಂದರೆ ನಿರ್ದಿಷ್ಟ ಭೂಪ್ರದೇಶದಲ್ಲಿ ಜನಿಸುವುದು, ಅಲ್ಲಿಯ ಪ್ರಜೆಗಳಾಗಿರುವ ತಂದೆ ತಾಯಿಯರಲ್ಲಿ ಜನಿಸುವುದು, ವಿವಾಹ ಮತ್ತು ಪರದೇಶದ ಪ್ರಜೆತನದ ಹಕ್ಕನ್ನು ಪಡೆಯುವುದು.

	ಪ್ರಜೆತನವನ್ನು ಮುಖ್ಯವಾಗಿ ಜನ್ಮಸ್ಥಳ ಮತ್ತು ರಕ್ತಸಂಬಂಧ ತತ್ತ್ವಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಜನ್ಮಸ್ಥಳ ಸೂತ್ರದ ಪ್ರಕಾರ, ತಂದೆ ತಾಯಿ ಯಾವುದೇ ರಾಜ್ಯದ ಪ್ರಜೆಗಳಾಗಿರಲಿ ಮಗು ಜನಿಸಿದ ಸ್ಥಳವನ್ನೇ ಮುಖ್ಯ ಅಂಶವಾಗಿ ಪರಿಗಣಿಸಿ ಪ್ರಜೆತನ ನೀಡಲಾಗುತ್ತದೆ. ಅಮೆರಿಕ, ಗ್ರೇಟ್ ಬ್ರಿಟನ್ ಹಾಗೂ ಹೆಚ್ಚಿನ ಲ್ಯಾಟಿನ್ ಅಮೆರಿಕನ್ ರಾಜ್ಯಗಳು ಈ ಸೂತ್ರವನ್ನು ಅನುಸರಿಸುತ್ತವೆ. ಹುಟ್ಟಿನಿಂದ ಪ್ರಜೆತನ ಪ್ರಾಪ್ತವಾಗುವ ತತ್ತ್ವವನ್ನು ಅವು ಮನ್ನಿಸಿದರೂ ಅದಕ್ಕೆ ಕಟ್ಟುನಿಟ್ಟಾದ ನಿರ್ಬಂಧವನ್ನು ವಿಧಿಸುತ್ತವೆ. ರಕ್ತಸಂಬಂಧ ಸೂತ್ರದ ಪ್ರಕಾರ, ಒಬ್ಬ ವ್ಯಕ್ತಿ ಯಾವುದೇ ರಾಜ್ಯದಲ್ಲಿ ಜನಿಸಲಿ, ಆ ವ್ಯಕ್ತಿ ಜನಿಸಿದ ಕಾಲಕ್ಕೆ ಆತನ ತಂದೆತಾಯಿಯರು ಯಾವ ರಾಜ್ಯದ ಪ್ರಜೆತನ ಪಡೆದಿದ್ದರೋ ಆ ರಾಜ್ಯದ ಪ್ರಜೆತನವನ್ನು ಆತನೂ ಪಡೆಯುತ್ತಾನೆ. ಫ್ರಾನ್ಸ್, ಜರ್ಮನಿ ಮತ್ತು ಇತರ ಯೂರೋಪಿಯನ್ ರಾಜ್ಯಗಳು ಈ ಸೂತ್ರವನ್ನು ಅನುಸರಿಸುತ್ತವೆ. ಒಂದು ರಾಜ್ಯದ ಪ್ರಜೆಗಳಾದ ತಂದೆತಾಯಿಯರಿಗೆ ಇನ್ನೊಂದು ರಾಜ್ಯದ ಭೂಪ್ರದೇಶದಲ್ಲಿ ಮಗು ಜನಿಸಿದಾಗ, ಭೂಪ್ರದೇಶದ ವ್ಯಾಪ್ತಿಗೆ ಸೇರಿದಂತೆ ವಿವಾದಗಳು ಉದ್ಭವಿಸುತ್ತವೆ. ಹಲವು ರಾಜ್ಯಗಳಲ್ಲಿ ವಿವಿಧ ಪ್ರಮಾಣಗಳಲ್ಲಿ ಈ ಎರಡೂ ಸೂತ್ರಗಳು ಬಳಕೆಯಲ್ಲಿವೆ. ನಿರ್ದಿಷ್ಟ ಸಮಯದಲ್ಲಿ ಒಬ್ಬ ವ್ಯಕ್ತಿಯ ಮೇಲೆ ಶಕ್ತಿಪೂರ್ಣ ವ್ಯಾಪ್ತಿ ಹೊಂದಿರುವ ರಾಜ್ಯಕ್ಕೆ ಮಹತ್ತ್ವ ನೀಡುವ ಅಧಾರದ ಮೇಲೆ ಭೂಪ್ರದೇಶದ ವ್ಯಾಪ್ತಿಗೆ ಸಂಬಂಧಿಸಿದ ವಿವಾದಗಳಲ್ಲಿ ಹೆಚ್ಚಿನವುಗಳನ್ನು ತೀರ್ಮಾನಿಸಲಾಗಿದೆ. ಕೆಲವು ವಿಶಿಷ್ಟ ಸಂದರ್ಭಗಳಲ್ಲಿ, ವ್ಯಕ್ತಿ ಪ್ರಾಪ್ತವಯಸ್ಕನಾದಾಗ, ಆತನ ಇಚ್ಛೆಯಂತೆ ಅವನ ತಂದೆ ತಾಯಿ ಇಲ್ಲವೇ ಜನ್ಮಸ್ಥಳದ ಆಧಾರದ ಮೇಲೆ ಪ್ರಜೆತನವನ್ನು ನಿರ್ಧರಿಸಲಾಗುತ್ತದೆ. 

ಇದಲ್ಲದೆ, ಒಂದು ನಿರ್ದಿಷ್ಟ ಕಾಲದವರೆಗೆ ಒಂದು ರಾಜ್ಯದಲ್ಲಿ ವಾಸಿಸಿದ ಅನಂತರ ಅಲ್ಲಿಯ ಪ್ರಜೆತನ ಪಡೆಯಬಹುದು. ಒಬ್ಬ ವಿದೇಶಿಯ ಒಂದು ರಾಜ್ಯದಲ್ಲಿ ಸರ್ಕಾರಿ ನೌಕರಿ ಗಳಿಸಿದರೆ ಆ ರಾಜ್ಯದ ಪ್ರಜೆತನ ಪಡೆಯುವ ಅವಕಾಶ ಹೊಂದಿರುತ್ತಾನೆ. ಇಲ್ಲವೇ ಆತ ಯಾವ ರಾಜ್ಯದ ಪ್ರಜೆಯಾಗಬೇಕೆಂದು ಅಪೇಕ್ಷಿಸುತ್ತಾನೋ ಆ ರಾಜ್ಯದ ಸರ್ಕಾರಕ್ಕೆ ಸೂಕ್ತ ಕಾರಣಗಳನ್ನು ನೀಡಿ ಅರ್ಜಿ ಸಲ್ಲಿಸಿ ಆ ರಾಜ್ಯದ ಪ್ರಜೆತನ ಪಡೆಯಬಹುದು.

	ಸಾಮಾನ್ಯವಾಗಿ ಸರ್ಕಾರಿ ನೌಕರಿ ಪಡೆಯುವ ಹಕ್ಕು, ಚುನಾವಣೆಯಲ್ಲಿ ಮತ ನೀಡುವುದು ಹಾಗೂ ಸ್ಪರ್ಧಿಸುವುದೇ ಮುಂತಾದ ರಾಜಕೀಯ ಹಕ್ಕುಗಳು ಇವನ್ನು ನೀಡುವುದು ಹಾಗೂ ಸ್ಪರ್ಧಿಸುವುದೇ ಇವನ್ನು ಪ್ರಜೆತನ ಒಳಗೊಂಡಿರುತ್ತದೆ. ಅಂತೆಯೇ ರಾಜ್ಯಕ್ಕೆ ನಿಷ್ಠೆ ಹಾಗೂ ಸೈನಿಕ ಸೇವೆಗಳನ್ನು ಸಲ್ಲಿಸುವ ಬಾಧ್ಯತೆಯನ್ನೂ ಒಳಗೊಂಡಿರುತ್ತದೆ. ವಿವಿಧ ದೇಶಗಳಲ್ಲಿ ಪ್ರಜೆತನಕ್ಕೆ ನೀಡಿರುವ ಮಹತ್ತ್ವವನ್ನು ಆಧರಿಸಿ ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ಹೀಗೆ ಸಿವಿಲ್ ಕಾನೂನು ಇರುವ ದೇಶಗಳಿಗೆ ಪ್ರಜೆಗೆ ಸಂಬಂಧಿಸಿದಂತೆ ವೈಯುಕ್ತಿಕ ಅರ್ಹತೆ (ಒಪ್ಪಂದ, ವಿವಾಹದ ಅರ್ಹತೆ, ಉಯಿಲು ಮಾಡುವುದು) ಜನನ, ಕುಟುಂಬದ ಸ್ಥಾನ, ವಿವಾಹ, ನಾಗರಿಕ ಆಗುಹೋಗುಗಳು ಆಸ್ತಿಯ ಉತ್ತರಾಧಿಕಾರ ಮುಂತಾದ ವಿಷಯಗಳು ಆ ರಾಜ್ಯದ ಕಾನೂನಿಗೆ ಅನುಗುಣವಾಗಿ ನಿರ್ಧಾರವಾಗುತ್ತವೆ. ಅಪರಾಧ ವಿಷಯಗಳಲ್ಲಿ (ತಪ್ಪಿಸಿಕೊಂಡು ಹೋಗಿ ಪರದೇಶದಲ್ಲಿ ಅಡಗಿಕೊಳ್ಳುವುದು, ದಂಡನೆಯ ವ್ಯಾಪ್ತಿ, ರಾಜದ್ರೋಹ) ಪ್ರಜೆತನ ರಾಷ್ಟ್ರೀಯವಾಗಿ ಬಲವಾದ ಪಾತ್ರ ವಹಿಸುತ್ತದೆ.

	ಪ್ರಜೆತನವನ್ನು ಪಡೆಯುವಂತೆ ಅದನ್ನು ಕಳೆದುಕೊಳ್ಳಲೂಬಹುದು. ಆದರೆ ಈ ವಿಚಾರವಾಗಿ ಎಲ್ಲ ರಾಜ್ಯಗಳಲ್ಲೂ ಏಕರೂಪವಾದ ನಿಯಮಗಳಿಲ್ಲ. 1. ಬೇರೊಂದು ರಾಜ್ಯದ ಪ್ರಜೆತನ ಪಡೆದಾಗ, 2. ಮತ್ತೊಂದು ರಾಜ್ಯದ ಸರ್ಕಾರಿ ಹುದ್ದೆಯಲ್ಲಿ ನೇಮಕಗೊಂಡಾಗ, 3. ರಾಜ್ಯದ ಸೈನಿಕ ಸೇವೆಯಲ್ಲಿದ್ದು, ಶತ್ರುವನ್ನು ಎದುರಿಸಬೇಕಾಗಿ ಬರುವ ಸಮಯದಲ್ಲಿ ಕರ್ತವ್ಯ ಭ್ರಷ್ಟನಾಗಿ ತಲೆತಪ್ಪಿಸಿಕೊಂಡಾಗ, 4. ತನ್ನ ರಾಜ್ಯದ ಒಪ್ಪಿಗೆಯಿಲ್ಲದೆ ಬೇರೆ ರಾಜ್ಯದಿಂದ ಬಿರುದುಬಾವಲಿಗಳನ್ನು ಪಡೆದಾಗ, 5. ದೇಶದ್ರೋಹದ ಆಪಾದನೆಗಾಗಿ ನ್ಯಾಯಾಲಯ ಶಿಕ್ಷೆ ವಿಧಿಸಿದಾಗ. 6. ಸೂಕ್ತ ಕಾರಣವಿಲ್ಲದೆ ದೀರ್ಘಕಾಲ ಬೇರೊಂದು ರಾಜ್ಯದಲ್ಲಿ ವಾಸಿಸಿದಾಗ, ಮತ್ತು 7. ಒಬ್ಬ ಸ್ತ್ರೀ ಬೇರೊಂದು ರಾಜ್ಯದ ಪ್ರಜೆಯೊಡನೆ ವಿವಾಹವಾದಾಗ ಪ್ರಜೆತನ ಕಳೆದುಕೊಳ್ಳಬೇಕಾಗುತ್ತದೆ. ಒಂದು ರಾಜ್ಯದ ಒಬ್ಬ ವ್ಯಕ್ತಿ ಪರದೇಶದ ಪೌರ ಹಕ್ಕನ್ನು ಪಡೆದು ಅಲ್ಲಿಯ ಪ್ರಜೆತನ ಪಡೆಯುವುದರ ಮೇಲೆ ಆ ರಾಜ್ಯ ತನ್ನ ಹಿತಾಸಕ್ತಿಗೆ ಸಂಬಂಧಿಸಿದಂತೆ ನಿಯಂತ್ರಣಾಧಿಕಾರ ಹೊಂದಿರುತ್ತದೆ.

	ಪ್ರಜೆತನ ಪಡೆಯುವುದು ಇಲ್ಲವೆ ಕಳೆದುಕೊಳ್ಳುವುದು, ಪ್ರಜೆತನದ ತ್ಯಾಗ ಇವನ್ನು ಕುರಿತಂತೆ ಏಕರೂಪವಾದ ವಿಧಿಗಳಿಲ್ಲವಾದ್ದರಿಂದ ರಾಜ್ಯರಹಿತತನ ಉಂಟಾಗುತ್ತದೆ. ಹಲವು ವೇಳೆ ವಿವಿಧ ರಾಷ್ಟ್ರೀಕತಾ ಕಾನೂನುಗಳು ಪರಸ್ವರ ವ್ಯಾಪಿಸುವುದರಿಂದ ದ್ವಿಪ್ರಜೆತನಕ್ಕೆ ಅಥವಾ ದ್ವಿರಾಷ್ಟ್ರೀಯತೆಗೆ ಎಡೆಯುಂಟಾಗುತ್ತದೆ. ಒಬ್ಬ ವ್ಯಕ್ತಿ ಎರಡು ರಾಜ್ಯಗಳ ಪ್ರಜೆಯಾಗಿರುವುದರಿಂದ ಪ್ರಜೆತನದ ಕರ್ತವ್ಯಗಳಲ್ಲಿ ತೊಡಕುಂಟಾಗುತ್ತದೆ. ಇಂಥ ತೊಡಕುಗಳನ್ನು ನಿವಾರಿಸಲು ಮುಖ್ಯವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನ ನಡೆಸಲಾಗಿದೆ.
(ಎಂ.ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ